ಕೋಲ್ಬೆ, ಅಡಾಲ್ಫ್‍ವಿಲ್‍ಹೆಲ್ಮ್ ಹರ್‍ಮನ್
1818-1884. ಜರ್ಮನಿಯ ರಸಾಯನವಿಜ್ಞಾನಿ. ನಿರವಯವ ವಸ್ತುಗಳಿಂದ ಸಾವಯವ ಸಂಯುಕ್ತವನ್ನು ಸರ್ವಸಮ್ಮತವಾದ ರೀತಿಯಲ್ಲಿ ಸಂಶ್ಲೇಷಿಸಿದ ಮೊದಲಿಗ. 1818ರ ಸೆಪ್ಟೆಂಬರ್ 27ರಂದು ಗಟಿಂಗೆನ್ ಬಳಿಯ ಯೆಲ್ಲಹಾಸೆನ್‍ನಲ್ಲಿ ಜನಿಸಿದ. ಫ್ರಿಡೆರಿಕ್ ಹೋಲರ್ ಕೈಕೆಳಗೆ ರಸಾಯನಶಾಸ್ತ್ರದ ಅಧ್ಯಯನವನ್ನು ಪ್ರಾರಂಭಿಸಿದ (1838). ಮಾರ್‍ಬರ್ಗ್‍ನಲ್ಲಿ ರಾಬರ್ಟ್ ವಿಲ್‍ಹೆಲ್ಮ್ ಬುನ್‍ಸೆನ್‍ಗೆ ಸಹಾಯಕನಾಗಿ ಸೇರಿ (1842) ಅನಿಲಗಳ ವಿಶ್ಲೇಷಣೆಯನ್ನು ಕಲಿತ. ಮುಂದೆ 1847ರಿಂದ 1851ರ ವರೆಗೆ ಬ್ರನ್ಸ್‍ವಿಕ್‍ನಲ್ಲಿ ಲೈಜಿಗ್ ಮತ್ತು ಹೇಲರ್‍ರವರ ಕೃತಿಗಳನ್ನು ಸಂಪಾದಿಸುವುದರಲ್ಲಿ ನಿರತನಾದ. ಬಳಿಕ ಬುನ್‍ಸೆನನ ಉತ್ತರಾಧಿಕಾರಿಯಾಗಿ ಮಾರ್‍ಬರ್ಗ್‍ಗೆ ಹಿಂತಿರುಗಿದ. 1965ರಲ್ಲಿ ಲೀಪ್‍ಜಿóಗ್‍ಗೆ ಆಹ್ವಾನಿಸಲ್ಪಟ್ಟು ಅಲ್ಲೇ 1884 ನವೆಂಬರ್ 5ರಂದು ಅಸುನೀಗಿದ.
   
ಪ್ರತ್ಯಕ್ಷ ಅಥವಾ ಪರೋಕ್ಷ ಸರಳ ಬದಲಿಕೆ ವಿಧಾನಗಳ ಮೂಲಕ ನಿರವಯವ ಸಂಯುಕ್ತಗಳಿಂದ ಸಾವಯವ ಸಂಯುಕ್ತಗಳ ತಯಾರಿಕೆ ಸಾಧ್ಯ ಎಂಬುದು ಕೋಲ್ಬೆ ವಾದ. ಮೂಲವಸ್ತುಗಳಿಂದ ತಯಾರಿಸಿದ ಕಾರ್ಬನ್ ಡೈಸಲ್ಫೈಡನ್ನು ಕ್ಲೋರಿನ್ ವರ್ತನೆಯಿಂದ ಅಸಿಟಿಕ್ ಆಮ್ಲವಾಗಿ ಪರಿವರ್ತಿಸಿದಾಗ ಈ ವಾದಕ್ಕೆ ಪುಷ್ಟಿ ದೊರೆಯಿತು. ಈತ ಮಂಡಿಸಿದ ರಚನಾಗುಚ್ಛಗಳ (ಸ್ಟ್ರಕ್ಚರಲ್ ರ್ಯಾಡಿಕಲ್ಸ್) ವಿಚಾರ ಮುಂದೆ ರಚನಾಸಿದ್ಧಾಂತದ ಸ್ಥಾಪನೆಗೆ ಮುಖ್ಯ ಕೊಡುಗೆಯಾಯಿತು. ಕೊಬ್ಬಿನ ಆಮ್ಲ ಮತ್ತು ಬೇರೆ ಆಮ್ಲಲವಣಗಳ ಮೇಲೆ ಈತ ನಡೆಸಿದ ವಿದ್ಯುದ್ವಿಶ್ಲೇಷಣೆಯಿಂದ, ಫಿನಾಲ್‍ನಿಂದ, ಸ್ಯಾಲಿಸಿಲಿಕ್ ಆಮ್ಲದ ತಯಾರಿಕೆಯಿಂದ ಮತ್ತು ನೈಟ್ರೋಮೀಥೇನನ್ನು ಕಂಡುಹಿಡಿಯುವುದರ ಮೂಲಕ ಕೋಲ್ಬೆ ಚಿರಪರಿಚಿತನಾಗಿದ್ದಾನೆ. ಜಲವಿಶ್ಲೇಷಣೆಯಿಂದ ನೈಟ್ರೇಟುಗಳು ಆಮ್ಲಗಳಾಗಿ ಮಾರ್ಪಡುತ್ತವೆನ್ನುವುದನ್ನು ಈತನೇ ಪರಿಶೋಧಿಸಿದ್ದು.                                    (ಎಲ್.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ